India
oi-Mamatha M
ನವದೆಹಲಿ, ಜನವರಿ, 23: ಹಿಜಾಬ್ ನಿಷೇಧ ವಿವಾದಲ್ಲಿ ವಿಭಜಿತ ತೀರ್ಪು ನೀಡಿದ ನಂತರ ಈ ವಿಷಯ ವಿಚಾರಣೆಗೆ ಮೂರು ನ್ಯಾಯಾಧೀಶರ ತ್ರಿಸದಸ್ಯ ಪೀಠವನ್ನು ರಚಿಸಲು ಪರಿಗಣಿಸುವುದಾಗಿ ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ.
ಕಳೆದ ವರ್ಷ ರಾಜ್ಯದಲ್ಲಿ ಮಾತ್ರವಲ್ಲದೇ ದೇಶದೆಲ್ಲೆಡೆ ಸದ್ದು ಮಾಡಿದ ವಿಷಯ ಹಿಜಾಬ್ ಬ್ಯಾನ್. ರಾಜ್ಯದ ಶಾಲಾ ಕಾಲೇಜುಗಳಲ್ಲಿ ಹಿಜಾಬ್ ನಿಷೇಧಿಸಿ ರಾಜ್ಯ ಸರ್ಕಾರ ಹೊರಡಿಸಿದ ಆದೇಶದ ವಿಚಾರಣೆ ಸುಪ್ರೀಂ ಕೋರ್ಟ್ ಮೇಟ್ಟಿಲೇರಿ ವಿಚಾರಣೆ ನಡೆಯುತ್ತಿದೆ.
ಹಿಜಾಬ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ನ ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಮತ್ತು ಸುಧಾಂಶು ಧುಲಿಯಾ ಅವರ ಪೀಠವು ಈ ಹಿಂದೆ ವಿಭಜಿತ ತೀರ್ಪು ನೀಡಿತ್ತು. ತರಗತಿ ಕೊಠಡಿಗಳಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸುವುದನ್ನು ನಿರ್ಬಂಧಿಸುವ ರಾಜ್ಯ ಸರ್ಕಾರದ ನಿರ್ಧಾರವನ್ನು ಬೆಂಬಲಿಸುವ ಕರ್ನಾಟಕ ಹೈಕೋರ್ಟ್ ಆದೇಶವನ್ನು ನ್ಯಾಯಮೂರ್ತಿ ಹೇಮಂತ್ ಗುಪ್ತಾ ಎತ್ತಿಹಿಡಿದ್ದರು. ಆದರೆ, ನ್ಯಾಯಮೂರ್ತಿ ಸುಧಾಂಶು ಧುಲಿಯಾ ಹಿಜಾಬ್ ನಿಷೇಧವನ್ನು ಒಪ್ಪದೆ ವಿಭಜಿತ ತೀರ್ಪು ನೀಡಿದ್ದರು. ಈ ತೀರ್ಪಿನ ಮೇಲೆ ಮೇಲ್ಮನವಿ ಸಲ್ಲಿಸಲಾಗಿತ್ತು.



ತ್ರಿಸದಸ್ಯ ಪೀಠ ರಚನೆಗೆ ಪರಿಗಣಿಸುತ್ತೇವೆ: ಸುಪ್ರೀಂ ಕೋರ್ಟ್
ಫೆಬ್ರವರಿ 6 ರಿಂದ ರಾಜ್ಯದಲ್ಲಿ ಕೆಲವು ತರಗತಿಗಳಿಗೆ ನಿಗದಿಯಾಗಿರುವ ಪ್ರಾಯೋಗಿಕ ಪರೀಕ್ಷೆಗಳನ್ನು ಗಮನದಲ್ಲಿಟ್ಟುಕೊಂಡು ಮಧ್ಯಂತರ ಆದೇಶದ ಅಗತ್ಯವಿದೆ ಎಂದು ಹಿರಿಯ ವಕೀಲರಾದ ಮೀನಾಕ್ಷಿ ಅರೋರಾ ಮನವಿ ಸಲ್ಲಿಸಿದ್ದರು. ಇದನ್ನು ಪರಿಗಣಿಸಿರುವ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ವಿ ರಾಮಸುಬ್ರಮಣಿಯನ್ ಮತ್ತು ಜೆಬಿ ಪಾರ್ದಿವಾಲಾ ಅವರನ್ನೊಳಗೊಂಡ ಪೀಠವು ತ್ರಿಸದಸ್ಯ ಪೀಠ ರಚನೆಗೆ ಪರಿಗಣಿಸುವುದಾಗಿ ತಿಳಿಸಿದೆ.
“ವಿದ್ಯಾರ್ಥಿನಿಯರಿಗೆ ಫೆಬ್ರವರಿ 6, 2023 ರಿಂದ ಪ್ರಾಯೋಗಿಕ ಪರೀಕ್ಷೆಗಳು ಆರಂಭವಾಗುತ್ತವೆ. ಈ ಪ್ರಾಯೋಗಿಕ ಪರೀಕ್ಷೆಗಳು ಸರ್ಕಾರಿ ಶಾಲೆಗಳಲ್ಲಿ ನಡೆಯಲಿವೆ. ಹೀಗಾಗಿ ಅವರು ಪರೀಕ್ಷೆಗೆ ಹಾಜರಾಗಲು ಈ ಹಿಜಾಬ್ ವಿಷಯದಲ್ಲಿ ಮಧ್ಯಂತರ ನಿರ್ದೇಶನ ನೀಡಬೇಕು” ಎಂದು ಹಿರಿಯ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.



ಹಿಜಾಬ್ ವಿಚಾರಣೆ ತ್ರಿಸದಸ್ಯ ಪೀಠದ ವಿಷಯವಾಗಿದೆ
ಹಿರಿಯ ವಕೀಲರ ಮನವಿ ಕೇಳಿದ ನ್ಯಾಯಾಲಯ, ಈ ವಿಷಯವನ್ನು ಪರಿಶೀಲಿಸುವುದಾಗಿ ತಿಳಿಸಿದೆ.
“ಈ ವಿಷಯವನ್ನು ನಾವು ಪರಿಶೀಲಿಸುತ್ತೇನೆ. ಹಿಜಾಬ್ ನಿಷೇಧ ವಿಚಾರ ಮೂವರು ನ್ಯಾಯಾಧೀಶರ ಪೀಠದ ವಿಷಯವಾಗಿದೆ. ಅದಕ್ಕಾಗಿ ನಾವು ದಿನಾಂಕವನ್ನು ನಿಗದಿಪಡಿಸುತ್ತೇವೆ” ಎಂದು ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಹೇಳಿದ್ದಾರೆ.
ಸುಪ್ರೀಂ ಕೋರ್ಟ್ನ ಇಬ್ಬರು ನ್ಯಾಯಾಧೀಶರ ಪೀಠವು ಕಳೆದ ವರ್ಷ ಅಕ್ಟೋಬರ್ 13 ರಂದು ಹಿಜಾಬ್ ವಿವಾದದಲ್ಲಿ ವಿರುದ್ಧ ತೀರ್ಪುಗಳನ್ನು ನೀಡಿ, ಪ್ರಕರಣದ ತೀರ್ಪು ನೀಡಲು ಸೂಕ್ತ ಪೀಠವನ್ನು ರಚಿಸುವಂತೆ ಮುಖ್ಯ ನ್ಯಾಯಾಧೀಶರಿಗೆ ಮನವಿ ಮಾಡಿತ್ತು.



ಹಿಜಾಬ್ ಧರಿಸುವುದು ಕೇವಲ ಆಯ್ಕೆಯ ವಿಚಾರ
ಇನ್ನು, ಒಂದು ಸಮುದಾಯವು ತನ್ನ ಧಾರ್ಮಿಕ ಚಿಹ್ನೆಗಳನ್ನು ಶಾಲೆಗಳಲ್ಲಿ ಧರಿಸಲು ಅನುಮತಿಸುವುದು ಜಾತ್ಯತೀತತೆಗೆ ವಿರೋಧಾಭಾಸ ಎಂದು ನ್ಯಾಯಮೂರ್ತಿ ಹೇಮಂತ್ ಗುಪ್ತಾ ಹೇಳಿದ್ದಾರೆ. ಆದರೆ ನ್ಯಾಯಮೂರ್ತಿ ಸುಧಾಂಶು ಧುಲಿಯಾ ಅವರು ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಅನ್ನು ಧರಿಸುವುದು ಕೇವಲ ಅವರ ಆಯ್ಕೆಯ ವಿಷಯ ಎಂದು ಹೇಳಿದ್ದರು.
ಹಿಜಾಬ್ ವಿವಾದದ ಶಾಶ್ವತ ಪರಿಹಾರಕ್ಕಾಗಿ ಕಾಯುತ್ತಿದ್ದವರಿಗೆ ಸುಪ್ರೀಂ ಕೋರ್ಟ್ ವಿಭಜನೆಯ ತೀರ್ಪು ನೀಡಿ, ಈ ವಿಷಯವನ್ನು ಮತ್ತಷ್ಟು ದಿನ ಮುಂದಕ್ಕೆ ಹಾಕಿತ್ತು.



ಉಡುಪಿಯಲ್ಲಿ ಹತ್ತಿದ ಕಿಡಿ ರಾಜ್ಯಾದ್ಯಂತ ಹೊತ್ತಿ ಉರಿದಿತ್ತು
ರಾಜ್ಯದ ಉಡುಪಿ ಜಿಲ್ಲೆಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮುಸ್ಲಿಂ ವಿದ್ಯಾರ್ಥಿನಿಯರು ತಮಗೆ ಹಿಜಾಬ್ ಧರಿಸಲು ಅನುಮತಿ ನೀಡುತ್ತಿಲ್ಲ ಎಂದು ಪ್ರತಿಭಟನೆ ಆರಂಭಿಸಿದ್ದರು. ಅಲ್ಲಿಂದ ಶುರುವಾದ ಈ ಗಲಾಟೆ ರಾಜ್ಯದ ಇತರ ಕಾಲೇಜುಗಳಿಗೂ ವ್ಯಾಪಿಸಿತ್ತು. ಈ ವಿದ್ಯಾರ್ಥಿನಿಯರು ಹಿಜಾಬ್ ಧರಿಸಲು ಅನುಮತಿ ಕೋರಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಆದರೆ, ಮಾರ್ಚ್ 15 ರಂದು, ಉಡುಪಿಯ ಸರ್ಕಾರಿ ಪದವಿ ಪೂರ್ವ ಬಾಲಕಿಯರ ಕಾಲೇಜಿನ ಮುಸ್ಲಿಂ ವಿದ್ಯಾರ್ಥಿನಿಯರು ಸಲ್ಲಿಸಿದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿತು. ಹಿಜಾಬ್ ಧರಿಸುವುದು ಇಸ್ಲಾಂ ಧರ್ಮದ ಅಗತ್ಯ ಧಾರ್ಮಿಕ ಆಚರಣೆಯ ಭಾಗವಲ್ಲ ಎಂದು ತೀರ್ಪು ನೀಡಿತ್ತು. ಈ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್ನಲ್ಲಿ ಹಲವು ಮೇಲ್ಮನವಿಗಳು ಸಲ್ಲಿಕೆಯಾಗಿದ್ದವು.
English summary
Karnataka Hijab ban row: Supreme Court on Jan 23rd said it will set three-judge bench to here the Karnataka Hijab ban in schools case. know more.
Story first published: Monday, January 23, 2023, 16:15 [IST]

